1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!
ನನ್ನ ಗ್ರಾಮದ ಒಬ್ಬ ಯುವಕ ದೊಡ್ಡಬಳ್ಳಾಪುರ ಸಮೀಪದ ಕಾರ್ಖಾನೆಯಲ್ಲಿ ಕೆಲಸಕ್ಕೆಂದು ಪ್ರತೀ ದಿನ 15 ಕಿಲೋಮೀಟರ್ ಸೈಕಲ್ ತುಳಿದು 🚴 ಓಡಾಡುತ್ತಿದ್ದ. ಇವನ ಜೊತೆ ಆಂಧ್ರ ಪ್ರದೇಶ ಮೂಲದ ಒಬ್ಬ ಯುವಕ ಸಹ ಕೆಲಸ ಮಾಡುತ್ತಿದ್ದ. ಕೈಗೆ ಬರುತ್ತಿದ್ದ ಸಂಬಳದಲ್ಲಿ ಇಬ್ಬರು ಮಾತನಾಡಿಕೊಂಡು ಒಂದು ಲಕ್ಷ ರೂಪಾಯಿ ಮೊತ್ತದ "ಚೀಟಿ" (ಒಂದು ರೀತಿಯ ಉಳಿತಾಯ ಯೋಜನೆಗೆ) ಕಟ್ಟುತ್ತಿದ್ದರು.
ಚೀಟಿ ಮುಗಿಯುತ್ತಿದ್ದಂತೆ ಇಬ್ಬರ ಕೈಗೆ ತಲಾ 1 ಲಕ್ಷ ರೂಪಾಯಿ ಬಂತು. ನಮ್ಮೂರಿನ ಯುವಕ ಪ್ರತೀ ದಿನ ಸೈಕಲ್ ನಲ್ಲಿ ಓಡಾಡಿ ಸಾಕಾಗಿದೆ ಅಂದುಕೊಂಡು Hero-Honda Passion ಬೈಕ್ ಖರೀದಿಸಿ ತನ್ನ "ಪರಿಶ್ರಮದಿಂದ ತೆಗೆದುಕೊಂಡ ಬೈಕು" ಎಂದು ಹೆಮ್ಮೆಯಿಂದ ಬೈಕ್ ನಲ್ಲಿ ಕೆಲಸಕ್ಕೆ ಓಡಾಡುತ್ತಿದ್ದ.
ಇವನ ಸಹೋದ್ಯೋಗಿ ಕಾರ್ಖಾನೆಯ ಸಮೀಪದಲ್ಲಿ ಒಂದು ಚಿಕ್ಕ ಮನೆ ಮಾಡಿ ನಡೆದುಕೊಂಡು🚶 ಓಡಾಡುತ್ತಿದ್ದ. ಚೀಟಿಯಿಂದ ಬಂದ 1 ಲಕ್ಷದ ಮೊತ್ತದ ಜೊತೆಗೆ ಇನ್ನು 20 ಸಾವಿರ ಹೇಗೋ ಕೂಡಿಸಿ, ಸ್ಥಳೀಯ ಇನ್ನೊಬ್ಬ ಸ್ನೇಹಿತನ ಸಹಾಯ ಪಡೆದು ಕಾರ್ಖಾನೆ ಪಕ್ಕದ ಊರಿನಲ್ಲಿ ಒಂದು ಖಾಲಿ ನಿವೇಶನ (Site) ಖರೀದಿಸಿದ.
ಕೆಲವೇ ವರ್ಷಗಲ್ಲಿ ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶಗಳು ಶರವೇಗದಲ್ಲಿ ಪ್ರಗತಿ ಕಂಡಿತು. ಈತ ಖರೀದಿಸಿದ್ದ ನಿವೇಶನಕ್ಕೆ ಬಾರಿ ಬೆಲೆ ಬಂತು. ಕೂಡಲೇ ಅದನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಡಿಮೆ ಬೆಲೆಯ 2 ಖಾಲಿ ನಿವೇಶನ ಖರೀದಿಸಿದ.
ಇದೇ ರೀತಿ ಮಾಡಿ ಕೇವಲ 10 ವರ್ಷದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮೊತ್ತದ ಮನೆ, ನಿವೇಶನಗಳ ಒಡೆಯನಾಗಿದ್ದಾನೆ. ಈಗ ಅವನು ಕಾರಿನಲ್ಲಿ ಓಡಾಡಿಕೊಂಡು ಇದೇ ಉದ್ಯೋಗವನ್ನು ಈಗಲೂ ಚೆನ್ನಾಗಿಯೇ ನಡೆಸುತ್ತಿದ್ದಾನೆ.
ನಮ್ಮೂರಿನ ಯುವಕನು ಇವತ್ತಿಗೂ ಅದೇ ಕಾರ್ಖಾನೆಗೆ ಅದೇ ಬೈಕ್ ನಲ್ಲಿ ಕೆಲಸಕ್ಕೆ ಓಡಾಡುತ್ತಿದ್ದಾನೆ. ಈಗ ಆ ಬೈಕ್ ಮಾರಾಟ ಮಾಡಿದರೆ ಹೆಚ್ಚು ಅಂದ್ರೆ 20 ಸಾವಿರಕ್ಕೆ ಹೋಗಬಹುದು ಅಷ್ಟೇ.
ಸೈಕಲ್ ನಲ್ಲಿ ಓಡಾಡೋದು ಕಷ್ಟ ಅನ್ನಿಸಿತು ಎಂದಾಗ ತನ್ನ ಸ್ನೇಹಿತನ ರೂಮ್ ನಲ್ಲೇ ಉಳಿದುಕೊಳ್ಳಬಹುದಿತ್ತು. ಆಗ ವಯಸ್ಸು 25 ಇತ್ತೇನೋ - ಅವಿವಾಹಿತ ಕೂಡ, ತೊಂದರೆ ಇರ್ತಾ ಇರ್ಲಿಲ್ಲ ಅನ್ಸುತ್ತೆ. ಆದರೆ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಮನಸ್ಥಿತಿ ಮಾತ್ರ ಬೇಕಿತ್ತು ಅಂತ ಕಾಣುತ್ತೆ ಅಷ್ಟೆ.
ಇವನ ಮಾತು ಕೇಳಿ ಆಂಧ್ರ ಮೂಲದ ಯುವಕ ಚೀಟಿ ಹಾಕಿ ಹಣ ಕೂಡಿಟ್ಟ. ಆದರೆ, ಆತನ ಮಾತು ಕೇಳಿ ಈತ ಸೈಟ್ ಖರೀದಿ ಮಾಡಲಿಲ್ಲ - ನಿರ್ಲಕ್ಷ್ಯ. ಇವನ ಆ ದಿನದ ನಿರ್ಧಾರ ನೆನಪಿಸಿಕೊಂಡು ಈತನೇ ಪೇಚಾಡುತ್ತಾನೆ.
ಭಾವನಾತ್ಮಕ ಚಿಂತನೆಯಿಂದ ಬಳಸುವ ಹಣ ವ್ಯಯ ಆಗುತ್ತೆ.
ವಿಚಾರವುಳ್ಳ ಚಿಂತನೆಯಿಂದ ಬಳಸುವ ಹಣ ಲಾಭದಾಯಕ ಬಂಡವಾಳ ಆಗುತ್ತೆ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060
Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ